ನವದೆಹಲಿ,ಆ.6- ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ಎರಡು ಮಹತ್ವದ ರಾಜಕೀಯ ಅಜೆಂಡಾಗಳಾದ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ ತಿದ್ದುಪಡಿ ಮಸೂದೆ-2026 ಹಾಗೂ ಕ್ಷೇತ್ರ ಪುನರ್‌ವಿಂಗಡಣೆ (ಡಿಲಿಮಿಟೇಶನ್) ಸಂಬಂಧಿತ ಸಾಂವಿಧಾನಿಕ ತಿದ್ದುಪಡಿ ಮಸೂದೆ ಈಗ ಪರಸ್ಪರ ರಾಜಕೀಯವಾಗಿ ಅವಿನಾಭಾವವಾಗಿ ಜೋಡಿಕೊಂಡಿವೆ.ಸರ್ಕಾರವು ಎಫ್‌ಸಿಆರ್‌ಎ ತಿದ್ದುಪಡಿ ಮಸೂದೆಯನ್ನು ಮುಂದಿಡಬೇಕೇ ಅಥವಾ ಡಿಲಿಮಿಟೇಶನ್ ಮಸೂದಿಗೆ ಅಗತ್ಯ ರಾಜಕೀಯ ಬೆಂಬಲವನ್ನು ಮೊದಲು ಭದ್ರಪಡಿಸಬೇಕೇ ಎಂಬ ಗೊಂದಲದಲ್ಲಿ ಸಿಲುಕಿರುವ ಚಿತ್ರಣ ಕಂಡುಬರುತ್ತಿದೆ.ಸಂಸತ್ತಿನಲ್ಲಿ ಸಾಮಾನ್ಯ ಕಾನೂನಾದ ಎಫ್‌ಸಿಆರ್‌ಎ ತಿದ್ದುಪಡಿ ಮಸೂದೆಗೆ ಸರಳ ಬಹುಮತ ಸಾಕಾಗುತ್ತದೆ.
ಆದರೆ ದೇಶದ ಚುನಾವಣಾ ಕ್ಷೇತ್ರಗಳ ಪುನರ್ವಿಂಗಡಣೆಗಾಗಿ ತರಬೇಕಾಗಿರುವ ಸಾಂವಿಧಾನಿಕ ತಿದ್ದುಪಡಿಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮೂರರಲ್ಲಿ ಎರಡು ಭಾಗದ ಬಹುಮತ ಅಗತ್ಯವಾಗುತ್ತದೆ. ಇದೇ ಕಾರಣಕ್ಕೆ ಬಿಜೆಪಿ ತನ್ನ ಎನ್‌ಡಿಎ ಮಿತ್ರಪಕ್ಷಗಳಷ್ಟೇ ಅಲ್ಲದೆ, ಕೆಲವು ಪ್ರಾದೇಶಿಕ ಪಕ್ಷಗಳ ಬೆಂಬಲವನ್ನೂ ಪಡೆಯಲು ರಾಜಕೀಯ ಸಂಪರ್ಕಗಳನ್ನು ಹೆಚ್ಚಿಸಿದೆ.ಆದರೆ ಇಲ್ಲಿ ಬಿಜೆಪಿಗೆ ರಾಜಕೀಯ ಕ್ಯಾಚ್ 22 ಪರಿಸ್ಥಿತಿ ನಿರ್ಮಾಣವಾಗಿದೆ.
ಡಿಲಿಮಿಟೇಶನ್ ಮಸೂದೆಗೆ ಬೆಂಬಲ ನೀಡುವ ಸಾಧ್ಯತೆ ಇರುವ ಕೆಲವು ಪ್ರಾದೇಶಿಕ ಪಕ್ಷಗಳೇ ಎಫ್‌ಸಿಆರ್‌ಎ ತಿದ್ದುಪಡಿ ಮಸೂದೆಯನ್ನು ತೀವ್ರವಾಗಿ ವಿರೋಧಿಸುತ್ತಿವೆ. ಹೀಗಾಗಿ ಒಂದು ಮಸೂದೆಯನ್ನು ಮುಂದೂಡುವುದು ಮತ್ತೊಂದು ಮಸೂದೆಯ ಭವಿಷ್ಯವನ್ನು ಪ್ರಭಾವಿಸುವ ಸ್ಥಿತಿ ಉಂಟಾಗಿದೆ.
