Top News

ಚಿತ್ರದುರ್ಗ: ಕೇಳೋರಿಲ್ಲದಂತಾದ ಟೊಮೆಟೊ..!

ಚಿತ್ರದುರ್ಗ: ಮುಂಗಾರು ಮಳೆ ಕೊರತೆಯಿಂದ ಜಿಲ್ಲೆಯಾದ್ಯಂತ ಮೆಕ್ಕೆಜೋಳ, ಸೂರ್ಯಕಾಂತಿ, ಶೇಂಗಾ ಬೆಳೆಗಳು ಬಾಡುತ್ತಿವೆ. ಆದರೆ, ಮಳೆ ಕೊರತೆಯೇ ಟೊಮೆಟೊ ಬೆಳೆಗೆ ವರವಾಗಿದ್ದು ಈ ಬಾರಿ ಅತ್ಯಧಿಕ ಫಸಲು ಬಂದಿದೆ. ಇದರಿಂದ ರೈತರಿಗೆ ಉಪಯೋಗವೇನೂ ಆಗಿಲ್ಲ. ಬೆಲೆ ಕುಸಿತದಿಂದ ರೈತರು ತೀವ್ರ ನಷ್ಟಕ್ಕೊಳಗಾಗಿದ್ದು ಅವರ ಗೋಳು ಕೇಳುವವರೇ ಇಲ್ಲದಾಗಿದೆ.

ಮಾರ್ಚ್‌, ಏಪ್ರಿಲ್‌ ತಿಂಗಳಲ್ಲಿ ನಾಟಿ ಮಾಡಲಾಗುತ್ತಿದ್ದ ಟೊಮೆಟೊ ಬೆಳೆ ಪ್ರತಿ ಬಾರಿಯೂ ಮುಂಗಾರು ಮಳೆಯ ಹೊಡೆತಕ್ಕೆ ಸಿಲುಕುತ್ತಿತ್ತು, ರೋಗದಿಂದ ನರಳುತ್ತಿತ್ತು. ಅದರ ನಡುವೆಯೂ ಉಳಿದ ಬೆಳೆಗೆ ಉತ್ತಮ ಬೆಲೆ ಸಿಗುತ್ತಿತ್ತು. ಆದರೆ ಈ ಬಾರಿ ಮುಂಗಾರು ಬಾರದ ಕಾರಣ ಮಳೆ ಹೊಡೆತದಿಂದ ಪಾರಾಗಿ ಅತ್ಯಧಿಕ ಇಳುವರಿ ಬಂದಿದೆ. ಇದರಿಂದ ಬೆಲೆ ಕುಸಿದಿದ್ದು ರೈತರಿಗೆ ನಷ್ಟ ಉಂಟಾಗಿದೆ.

ಕಳೆದ ವರ್ಷ ಜಿಲ್ಲೆಯಲ್ಲಿ 3,500 ಹೆಕ್ಟೇರ್‌ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗಿತ್ತು. ಈ ಬಾರಿಯ ಮಾರ್ಚ್‌, ಏಪ್ರಿಲ್‌ ತಿಂಗಳಲ್ಲಿ ಉತ್ತಮ ಬೆಲೆ ಸಿಕ್ಕ ಪರಿಣಾಮ ಅತೀ ಹೆಚ್ಚು ರೈತರು ಟೊಮೆಟೊ ನಾಟಿ ಮಾಡಿದರು. ಈ ಬಾರಿಯ ಒಟ್ಟು ನಾಟಿ ಪ್ರದೇಶ 7,960ಕ್ಕೆ ಹೆಚ್ಚಾಗಿದೆ. ಇದರಿಂದ 3.50 ಲಕ್ಷ ಟನ್‌ ಇಳುವರಿ ಬಂದಿದ್ದು ಬೆಲೆ ಕುಸಿತವಾಗಲು ಪ್ರಮುಖ ಕಾರಣ ಎನ್ನಲಾಗಿದೆ.

ಒಟ್ಟಾರೆ ಬಿತ್ತನೆ ಪ್ರದೇಶದಲ್ಲಿ 7,500 ಹೆಕ್ಟೇರ್‌ ಪ್ರದೇಶದಲ್ಲಿ ಚಳ್ಳಕೆರೆ ತಾಲ್ಲೂಕಿನ ಬೆಳೆಗಾರರು ಟೊಮೆಟೊ ಬೆಳೆದಿದ್ದಾರೆ. ಮೊಳಕಾಲ್ಮುರು ತಾಲ್ಲೂಕಿನಲ್ಲಿ 150 ಹೆಕ್ಟೇರ್‌ ಬಿತ್ತನೆ ‌ಪ್ರದೇಶವಿದೆ. ಸದ್ಯ ಚಳ್ಳಕೆರೆ ತಾಲ್ಲೂಕಿನ ರೈತರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದು ನಷ್ಟ ಎದುರಿಸುತ್ತಿದ್ದಾರೆ. ಚಳ್ಳಕೆರೆ ತಾಲ್ಲೂಕಿನ ಕಸಬಾ, ತಳಕು, ಪರಶುರಾಂಪುರ ಹೋಬಳಿ ವ್ಯಾಪ್ತಿಯಲ್ಲಿ ಅತ್ಯಧಿಕವಾಗಿ ಬೆಳೆದಿದ್ದಾರೆ.

ಚಿಕ್ಕಮ್ಮನಹಳ್ಳಿ ಗೇಟ್‌ ಬಳಿ ಟೊಮೆಟೊ ಮಾರುಕಟ್ಟೆಯೇ ಇದ್ದು ಅಲ್ಲಿಗೆ ಅಪಾರ ಪ್ರಮಾಣದ ಟೊಮೆಟೊ ಹರಿದು ಬರುತ್ತಿದೆ. ಪ್ರತಿ ಕ್ರೇಟ್‌ (15 ಕೆ.ಜಿ) ಟೊಮೆಟೊ ₹ 60- ₹ 70ಕ್ಕೆ ಮಾರಾಟವಾಗುತ್ತಿದ್ದು ರೈತರಿಗೆ ಹಾಕಿದ ಬಂಡವಾಳವೂ ಬಾರದಾಗಿದೆ. ಮಾರುಕಟ್ಟೆಯ ಆಸುಪಾಸಿನಲ್ಲಿ, ರಸ್ತೆ ಬದಿಯಲ್ಲಿ ರೈತರು ಅಪಾರ ಪ್ರಮಾಣದ ಟೊಮೆಟೊ ಸುರಿದು ಹೋಗುತ್ತಿದ್ದಾರೆ.

‘3 ಎಕರೆ ಜಮೀನಿನಲ್ಲಿ ಟೊಮೆಟೊ ಉತ್ತಮ ಫಸಲು ಬಂದಿದೆ. ಇಲ್ಲಿಯವರೆಗೂ ₹ 3 ಲಕ್ಷ ಖರ್ಚಾಗಿದೆ. ಬೆಲೆ ಕುಸಿದಿರುವ ಕಾರಣ ಹಾಕಿದ ಬಂಡವಾಳವೂ ಬರುತ್ತಿಲ್ಲ. 150 ಕ್ರೇಟ್‌ ಟೊಮೆಟೊವನ್ನು ರಸ್ತೆಗೆ ಸುರಿದಿದ್ದೇನೆ’ ಎಂದು ತಳಕು ಗ್ರಾಮದ ಸಿ.ಕುಮಾರ್‌ ಬೇಸರದಿಂದ ಹೇಳಿದರು.

ಜಿಲ್ಲೆಯಲ್ಲಿ ಟೊಮೆಟೊಗೆ ಬೆಲೆ ಸಿಗದಿದ್ದರೆ ಇಲ್ಲಿಯ ರೈತರು ಕೋಲಾರದ ಮಾರುಕಟ್ಟೆಗೆ ತೆರಳುತ್ತಿದ್ದರು. ಆದರೆ ಇಡೀ ರಾಜ್ಯದಲ್ಲಿ ಬೆಲೆ ಕುಸಿದಿರುವ ಕಾರಣ ಅಲ್ಲಿಗೂ ಸಾಗಣೆ ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಚಳ್ಳಕೆರೆಯಿಂದ ಕೋಲಾರಕ್ಕೆ ಸಾಗಿಸಲು ಪ್ರತಿ ಕ್ರೇಟ್‌ಗೆ ₹ 50 ಬಾಡಿಗೆ ಪಾವತಿ ಮಾಡಬೇಕಾಗಿದೆ. ಸದ್ಯ ಇದರ ಬೆಲೆಯೇ ಅಷ್ಟಿರುವ ಕಾರಣ ರೈತರು ಫಸಲನ್ನು ರಸ್ತೆಗೆ ಸುರಿದು ಹೋಗುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!