Top News

ವಿಧಾನ ಪರಿಷತ್ ಸದಸ್ಯೆಯಾಗಿ ಗಾಯತ್ರಿ ಶಾಂತೇಗೌಡ ಪ್ರಮಾಣವಚನ ಸ್ವೀಕಾರ

ಬೆಂಗಳೂರು: ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಅವರು ವಿಧಾನ ಪರಿಷತ್ (MLC) ಸದಸ್ಯೆಯಾಗಿ ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಕಚೇರಿಯಲ್ಲಿ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ನಾಲ್ಕುವರೆ ವರ್ಷಗಳ ಕಾನೂನು ಹೋರಾಟ:

2021ರ ಡಿಸೆಂಬರ್‌ನಲ್ಲಿ ನಡೆದಿದ್ದ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್ ಅವರು ಕೇವಲ 6 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಘೋಷಿಸಲಾಗಿತ್ತು. ಆದರೆ, ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಿತ ಸದಸ್ಯರ ಮತಣ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಗಾಯತ್ರಿ ಶಾಂತೇಗೌಡ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಆದೇಶದಂತೆ ನಡೆಸಲಾದ ಮರುಎಣಿಕೆ ಹಾಗೂ ನಂತರ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಕಾನೂನು ಸಮರದ ಬಳಿಕ, ಹೈಕೋರ್ಟ್ ಗಾಯತ್ರಿ ಶಾಂತೇಗೌಡ ಅವರನ್ನೇ ವಿಜೇತ ಅಭ್ಯರ್ಥಿ ಎಂದು ಅಂತಿಮ ತೀರ್ಪು ಪ್ರಕಟಿಸಿತು. 6 ವರ್ಷಗಳ ಅವಧಿಯಲ್ಲಿ ಈಗಾಗಲೇ 4.5 ವರ್ಷಗಳು ಕಳೆದುಹೋಗಿದ್ದು, ಉಳಿದ ಅವಧಿಗೆ ಗಾಯತ್ರಿ ಅವರು MLC ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಸಚಿವ ಸಂಪುಟ ಸೇರ್ಪಡೆ ಕುರಿತು ಕುತೂಹಲ:

ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ವಿಸ್ತರಣೆ ವೇಳೆ ಗಾಯತ್ರಿ ಶಾಂತೇಗೌಡ ಅವರ ಹೆಸರು ಅಂತಿಮ ಪಟ್ಟಿಯಲ್ಲಿದ್ದರೂ, ತಾಂತ್ರಿಕವಾಗಿ ಅವರು ಇನ್ನೂ MLC ಆಗಿ ಪ್ರಮಾಣವಚನ ಸ್ವೀಕರಿಸಿರದ ಕಾರಣ ಹಾಗೂ ಕೊನೆ ಕ್ಷಣದ ರಾಜಕೀಯ ಬೆಳವಣಿಗೆಗಳಿಂದಾಗಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ.

ಇದೀಗ ವಿಧಾನ ಪರಿಷತ್ ಸದಸ್ಯೆಯಾಗಿ ಪ್ರಮಾಣವಚನ ಸ್ವೀಕರಿಸಿರುವ ಹಿನ್ನೆಲೆಯಲ್ಲಿ, ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಗಳು ಮತ್ತೆ ಜೀವ ಪಡೆದುಕೊಂಡಿವೆ. ಪ್ರಮಾಣವಚನ ಸ್ವೀಕಾರದ ನಂತರ ಅವರು ಕಾಂಗ್ರೆಸ್ ವರಿಷ್ಠರು ಹಾಗೂ ಮುಖ್ಯಮಂತ್ರಿಗಳನ್ನು ಭೇಟಿಯಾಗಲಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಸಚಿವ ಸ್ಥಾನದ ಕುರಿತು ಸ್ಪಷ್ಟ ಚಿತ್ರಣ ಸಿಗುವ ನಿರೀಕ್ಷೆಯಿದೆ.

ಸಭಾಪತಿ ಕಚೇರಿಯಲ್ಲಿ ನಡೆದ ಸರಳ ಪ್ರಮಾಣವಚನ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು, ಜನಪ್ರತಿನಿಧಿಗಳು ಹಾಗೂ ಬೆಂಬಲಿಗರು ಉಪಸ್ಥಿತರಿದ್ದು, ನೂತನ ಸದಸ್ಯೆಗೆ ಶುಭಾಶಯ ಕೋರಿದರು.

Leave a Reply

Your email address will not be published. Required fields are marked *

error: Content is protected !!