Top News

ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ಸಿಕ್ಕೇ ಸಿಗುತ್ತೆ : ಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ

ಬೆಂಗಳೂರು: ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸೂಕ್ತ ಹಾಗೂ ಮುಂಚೂಣಿ ಪ್ರಾತಿನಿಧ್ಯ ನೀಡುವ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಸುಳಿವು ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರವು ಮಹಿಳಾ ಸಬಲೀಕರಣಕ್ಕೆ ಸದಾ ಬದ್ಧವಾಗಿದ್ದು, ಮುಂದಿನ ಸಂಪುಟ ವಿಸ್ತರಣೆ ವೇಳೆ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ನೀಡಿ ಹೆಚ್ಚು ಶಕ್ತಿ ತುಂಬಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಕುರಿತು ಮಾತನಾಡಿದ್ದಕ್ಕೆ ಪ್ರತಿಯಾಗಿ, ‘ಕರ್ನಾಟಕ ಸಂಪುಟದಲ್ಲಿ ಮಹಿಳೆಯರಿಲ್ಲ’ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಮಾಡಿದ್ದ ಟೀಕೆಗೆ ಡಿ.ಕೆ. ಶಿವಕುಮಾರ್ ಕೌಂಟರ್ ನೀಡಿದ್ದಾರೆ. ಮಹಿಳಾ ಮೀಸಲಾತಿ ಮಸೂದೆಯ ನೈಜ ರೂವಾರಿಗಳೇ ಕಾಂಗ್ರೆಸ್ ನಾಯಕರು. ಇತಿಹಾಸದಲ್ಲಿ ಈ ಮಸೂದೆಯನ್ನು ರೂಪಿಸಿ ಲೋಕಸಭೆಯಲ್ಲಿ ಅಂಗೀಕರಿಸಿದ್ದು ನಮ್ಮ ಪಕ್ಷವೇ ಹೊರತು ಬಿಜೆಪಿಯಲ್ಲ. ಇತ್ತೀಚಿನ ಲೋಕಸಭೆ ಚುನಾವಣೆಯಲ್ಲೂ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶ ನೀಡಿತ್ತು ಎಂಬುದನ್ನು ಅವರು ನೆನಪಿಸಿದರು.

ಪ್ರಸ್ತುತ ಬಾಕಿ ಉಳಿದಿರುವ ರಾಜ್ಯ ಸಚಿವ ಸಂಪುಟ ಪುನರ್‌ರಚನೆ ಹಾಗೂ ವಿಸ್ತರಣೆಯ ವಿಚಾರವು ಶೀಘ್ರದಲ್ಲೇ ಸುಸೂತ್ರವಾಗಿ ಬಗೆಹರಿಯಲಿದೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಕೇಂದ್ರ ಸಚಿವ ರಿಜಿಜು ಅವರಿಗೆ ತಿರುಗೇಟು ನೀಡಿದ ಅವರು, “ರಿಜಿಜು ಅವರು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅದರ ಬದಲು ತಮ್ಮ ಪಕ್ಷ ಹಾಗೂ ಸರ್ಕಾರದ ಆಡಳಿತದ ಕಡೆಗೆ ಗಮನ ಹರಿಸಲಿ” ಎಂದು ನೇರವಾಗಿ ಸಲಹೆ ನೀಡಿದರು.

Leave a Reply

Your email address will not be published. Required fields are marked *

error: Content is protected !!