ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರು ಉಸಿರಾಟ ಸಮಸ್ಯೆಯಿಂದ ನಿಧನರಾಗಿದ್ದು, ಬೆಂಗಳೂರಿನ ಪದ್ಮನಾಭನಗರದಲ್ಲಿರುವ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ನಂತರ ಬೆಂಗಳೂರಿನಿಂದ ಹಾಸನ ಜಿಲ್ಲೆ ಹೊಳೆನರಸೀಪುರಕ್ಕೆ ಪಾರ್ಥಿವ ಶರೀರ ಕೊಂಡೊಯ್ಯಲಿದ್ದು, ಸೋಮವಾರ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು.
19-07-2026 ಭಾನುವಾರ, ಬೆಳಗ್ಗೆ 7 ರಿಂದ 11 ಗಂಟೆಯವರೆಗೆ ಬೆಂಗಳೂರಿನ ಪದ್ಮನಾಭನಗರದಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಂತರ ಪಾರ್ಥಿವ ಶರೀರವನ್ನು ಹೊಳೆನರಸೀಪುರಕ್ಕೆ ಕೊಂಡೊಯ್ಯಲಾಗುತ್ತದೆ.
ನೆಲಮಂಗಲ ಕ್ರಾಸ್, ಸೋಲೂರು ಕ್ರಾಸ್, ಮರೂರು ಹ್ಯಾಂಡ್ ಪೋಸ್ಟ್, ಕುಣಿಗಲ್ ಕ್ರಾಸ್, ಬೆಳ್ಳೂರು ಕ್ರಾಸ್, ಕದಬಳ್ಳಿ ಕ್ರಾಸ್, ಹಿರಿಸಾವೆ ಕ್ರಾಸ್, ಚನ್ನರಾಯಪಟ್ಟಣ, ಎಲೆಯೂರು(ಉದಯಪುರ0, ಶಾಂತಿಗ್ರಾಮ, ಭೂನಳ್ಳಿ ಕ್ರಾಸ್, ಹಾಸನ ಡೈರಿ ಸರ್ಕಲ್, ಎನ್ಆರ್ ಸರ್ಕಲ್, ಮೊಸಳೆ ಹೊಸಹಳ್ಳಿ ಮಾರ್ಗವಾಗಿ ತೆರಳಿ ರಾತ್ರಿ ಹೊಳೆನರಸೀಪುರದಲ್ಲಿರುವ ರೇವಣ್ಣನವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಜುಲೈ 20ರಂದು ಸೋಮವಾರ ಬೆಳಗ್ಗೆ 7 ಗಂಟೆಯಿಂದ 9:30ವರೆಗೆ ಹೆಚ್.ಡಿ. ರೇವಣ್ಣ ಅವರ ಹೊಳೆನರಸೀಪುರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 10 ಗಂಟೆಗೆ ಹೊಳೆನರಸೀಪುರದಿಂದ ಹೊರಟು 11.30 ಮಾವಿನಕೆರೆ ಶ್ರೀರಂಗನಾಥ ಸ್ವಾಮಿ ಬೆಟ್ಟದ ತಪ್ಪಲು ಹಳೇಕೋಟೆಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಮಧ್ಯಾಹ್ನ 2 ರಿಂದ ಸಂಜೆ 4:15 ರವರೆಗೆ ಅಂತ್ಯಕ್ರಿಯೆ ವಿಧಿ ವಿಧಾನ ನೆರವೇರಿಸಲಾಗುವುದು.
