Bengaluru Metro: ಬ್ರ್ಯಾಂಡ್ ಬೆಂಗಳೂರು ಹಾಗೂ ಬೆಂಗಳೂರಿನಿಂದ ಆಗುವ ಲಾಭ – ಲೆಕ್ಕಾಚಾರದ ಮೇಲೆ ತಮಿಳುನಾಡು ಮತ್ತೊಮ್ಮೆ ಕಣ್ಣಿಟ್ಟಿದೆ. ಬೆಂಗಳೂರಿಗೆ ಪೈಪೋಟಿ ನೀಡುವ ಹಲವು ಯೋಜನೆಗಳನ್ನು ಈಗಾಗಲೇ ತಮಿಳುನಾಡು ಈ ಹಿಂದಿನ ಸರ್ಕಾರ ದ್ರಾವಿಣ ಮುನ್ನೇತ್ರ ಕಳಗಂ ಪಕ್ಷವು ಪ್ರಾರಂಭಿಸಿತ್ತು.ಇದೀಗ ತಮಿಳುನಾಡಿನಲ್ಲಿ ಆಡಳಿತ ನಡೆಸುತ್ತಿರುವ ತಮಿಳಗ ವೆಟ್ರಿ ಕಳಗಂ ಪಕ್ಷವು ಬೆಂಗಳೂರಿನ ನಮ್ಮ ಮೆಟ್ರೋ ಜಾಲದ ಮೇಲೆ ಕಣ್ಣಿಟ್ಟಿದೆ.
ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪರ್ಯಾಯವಾಗಿ ಹೊಸೂರಿನಲ್ಲಿ ಹೊಸ ಹಾಗೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎಂದು ತಮಿಳುನಾಡು ಉದ್ದೇಶಿಸಿತ್ತು. ಈ ಸಂಬಂಧ ಈ ಹಿಂದಿನ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಹ ಸಲ್ಲಿಸಿತ್ತು. ಇದೀಗ ತಮಿಳುನಾಡು ಸರ್ಕಾರವು ಹೊಸೂರಿನಿಂದ ಕರ್ನಾಟಕದ ಬೊಮ್ಮಸಂದ್ರಕ್ಕೆ ಮೆಟ್ರೋ ರೈಲು ಸಂಪರ್ಕ ಜಾಲ ವಿಸ್ತರಿಸುವ ಪ್ರಸ್ತಾವನೆಯನ್ನು ಅನುಸರಿಸುತ್ತಿರುವುದಾಗಿ ತಮಿಳುನಾಡಿನ ಹಣಕಾಸು ಸಚಿವ ಎನ್. ಮೇರಿ ವಿಲ್ಸನ್ ಅವರು ಹೇಳಿದ್ದಾರೆ.
ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಕಾವೇರಿ ನದಿ ನೀರು ಹಂಚಿಕೆ ವಿವಾದವು ಜೋರಾಗಿ ಇರುವಾಗಲೇ ತಮಿಳುನಾಡಿನ ಹೊಸೂರಿಗೆ ಬೆಂಗಳೂರಿನ ನಮ್ಮ ಮೆಟ್ರೋದ ವಿಸ್ತರಣೆ ವಿಷಯವನ್ನು ತಮಿಳುನಾಡಿನ ಸರ್ಕಾರವು ತನ್ನ ಬಜೆಟ್‌ನಲ್ಲಿ ಪ್ರಸ್ತಾಪಿಸಿದೆ. ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದ ಮೇಲೆ ವಿಜಯ್ ದಳಪತಿ ಅವರ ಆಡಳಿತರೂಢ ತಮಿಳಗ ವೆಟ್ರಿ ಕಳಗಂ ಪಕ್ಷವು ಮಂಡಿಸಿರುವ ಮೊದಲ ಬಜೆಟ್ ಇದಾಗಿದೆ.
