ಮೈಸೂರು: ತಂದೆ ಸಿದ್ದರಾಮಯ್ಯ ಅವರು ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ಸಚಿವ ಸ್ಥಾನ ಕೊಡುವಂತೆ ಕೇಳಿದ್ದರು. ಆದರೆ, ಹೈಕಮಾಂಡ್ ದಲಿತ ಬಲಗೈಯಲ್ಲಿ ಹೊಸ ಮುಖಕ್ಕೆ ಅವಕಾಶ ನೀಡಲೆಂದು ಪಿ.ಎಂ. ನರೇಂದ್ರಸ್ವಾಮಿ ಅವರನ್ನು ಆಯ್ಕೆ ಮಾಡಿದೆ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಇಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ತಂದೆ ಶಿಫಾರಸು ಮಾಡಿದವರಲ್ಲಿ ಬಹುತೇಕರಿಗೆ ಸ್ಥಾನ ಸಿಕ್ಕಿದೆ. ಅವರು ನೀಡಿದ್ದ ಎರಡು ಪಟ್ಟಿಯಲ್ಲೂ ಮಹದೇವಪ್ಪ ಅವರ ಹೆಸರಿತ್ತಾದರೂ ಹೈಕಮಾಂಡ್ ಒಪ್ಪಿಲ್ಲ’ ಎಂದರು.
‘ಬಿ.ಝಡ್. ಜಮೀರ್ ಅಹಮದ್ ಖಾನ್ ಅವರಿಗೆ ಸಚಿವ ಸ್ಥಾನ ಕೊಡುವಂತೆ ಕೇಳಿರಲಿಲ್ಲ. ಗಾಯತ್ರಿ ಅವರು ಸಚಿವರಾಗದ ವಿಚಾರದಲ್ಲಿ ತಂದೆಯ ಪಾತ್ರವಿಲ್ಲ. ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ತಪ್ಪಿದ ಹಿಂದೆ ಅವರ ಕೈವಾಡವೇನಿಲ್ಲ’ ಎಂದು ಹೇಳಿದರು.
‘ಈ ಸಚಿವ ಸಂಪುಟದ ಬಗ್ಗೆ ಸಿದ್ದರಾಮಯ್ಯ ಅವರಿಗೆ ಯಾವ ಅಸಮಾಧಾನವೂ ಇಲ್ಲ. ಕೆಲವೊಮ್ಮೆ ಕೆಲವು ಜಾತಿಗಳಿಗೆ ಅವಕಾಶ ತಪ್ಪುತ್ತದೆ. ಅದನ್ನು ಬೇರೆ ರೀತಿಯಲ್ಲಿ ಸರಿದೂಗಿಸಲಾಗುತ್ತದೆ’ ಎಂದರು.
ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದರಿಂದ…
‘ತಂದೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಕಾರಣದಿಂದ ನನಗೆ ಸಚಿವ ಸ್ಥಾನ ನೀಡಲಾಗಿದೆ. ಇಲ್ಲದಿದ್ದರೆ ಸಹಜವಾಗಿಯೇ ನಮ್ಮ ಸಮುದಾಯಕ್ಕೆ ಬೇಸರವಾಗುತ್ತಿತ್ತು. ಹೀಗಾಗಿ, ನನಗೆ ಸ್ಥಾನ ಕೊಟ್ಟಿದ್ದರಲ್ಲಿ ಯಾವುದೇ ತಪ್ಪಿಲ್ಲ. ಹಿರಿಯರಾದ ಮಹದೇವಪ್ಪ ಹಾಗೂ ತನ್ವೀರ್ ಸೇಠ್ ಅವರನ್ನು ಭೇಟಿಯಾಗಿ ಮಾತನಾಡುತ್ತೇನೆ’ ಎಂದು ಪ್ರತಿಕ್ರಿಯಿಸಿದರು.
ತನ್ವೀರ್‌ಗೆ ಸಚಿವ ಸ್ಥಾನ ತಪ್ಪಲು ಸಿದ್ದರಾಮಯ್ಯ ಕಾರಣ ಎಂಬ ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಅವರು ಏನೇನೋ ಹೇಳುತ್ತಾರೆ. ಸಾಕ್ಷಿ ಆಧಾರವಿಲ್ಲದೇ ಮಾತನಾಡುತ್ತಾರೆ. ಹೈಕಮಾಂಡ್ ಹಲವು ಕಾರಣದಿಂದ ನಿರ್ಧಾರವನ್ನು ಕೈಗೊಂಡಿದೆ’ ಎಂದರು.
