ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಮಕ್ಕಳ ರಾಜಕೀಯ ಭವಿಷ್ಯಕ್ಕಾಗಿ ತಮ್ಮದೇ ಪಕ್ಷದ ಹಿರಿಯ ನಾಯಕರ ರಾಜಕೀಯ ಜೀವನವನ್ನು ಮುಗಿಸಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಮಗನನ್ನು ಸಚಿವರನ್ನಾಗಿ ಮಾಡಲು ಅಲ್ಲಿನ ನಾಯಕರನ್ನು ಮೂಲೆಗುಂಪು ಮಾಡಿದರೆ, ಮೈಸೂರು ಭಾಗದಲ್ಲಿ ಶಾಸಕ ಯತೀಂದ್ರ ಅವರನ್ನು ನಾಯಕನನ್ನಾಗಿ ಬೆಳೆಸಲು ಸಿದ್ದರಾಮಯ್ಯ ಅವರು ಡಾ. ಹೆಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್ ಹಾಗೂ ತನ್ವೀರ್ ಸೇಠ್ ಅವರಂತಹ ಸಭ್ಯ ರಾಜಕಾರಣಿಗಳ ಅವಕಾಶ ತಪ್ಪಿಸಿ ಅವರ ರಾಜಕೀಯ ಮುಗಿಸಿದ್ದಾರೆ ಎಂದು ಆರೋಪಿಸಿದರು.
ದಲಿತರ ಧ್ವನಿಯಾಗಿದ್ದ ಡಾ. ಮಹದೇವಪ್ಪ ಮತ್ತು ಕೆ. ವೆಂಕಟೇಶ್ ಅವರು ಸದಾ ಸಿದ್ದರಾಮಯ್ಯ ಅವರ ಜೊತೆಗಿದ್ದರು. ಆದರೆ ಸಿದ್ದರಾಮಯ್ಯ ತಮ್ಮ ಮಗನ ತಲೆ ಮೇಲೆ ಮಾತ್ರ ಅಧಿಕಾರದ ಕಿರೀಟ ಇರಬೇಕು ಎಂಬ ಕಾರಣಕ್ಕೆ ತಮ್ಮದೇ ಆಪ್ತ ಸ್ನೇಹಿತರ ರಾಜಕೀಯಕ್ಕೆ ತಣ್ಣೀರೆರೆದಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಅವರು ಸ್ವಂತ ಮೆರಿಟ್ ಆಧಾರದಲ್ಲಿ ಮಂತ್ರಿಯಾಗಿಲ್ಲ, ಬದಲಿಗೆ ‘ಅಪ್ಪನ ಕೋಟಾ’ದಲ್ಲಿ ಸಚಿವರಾಗಿದ್ದಾರೆ. ಮೆರಿಟ್ ಇಲ್ಲದ ಮಗ ಈ ಭಾಗದ ನಾಯಕನಾಗುವುದಿಲ್ಲ ಎಂಬ ಭೀತಿಯಿಂದಲೇ ಸಿದ್ದರಾಮಯ್ಯ ಅವರು ದಲಿತ ನಾಯಕರ ಧ್ವನಿಯನ್ನು ಅಡಗಿಸಿದ್ದಾರೆ ಎಂದು ಸಿಂಹ ಕಿಡಿಕಾರಿದರು.
ಇದೇ ವೇಳೆ ಕಾಂಗ್ರೆಸ್ ಸರ್ಕಾರವನ್ನು ಮಹಿಳಾ ವಿರೋಧಿ ಎಂದು ಟೀಕಿಸಿದ ಅವರು, ಸಚಿವ ಸಂಪುಟದಲ್ಲಿ ಸೂಕ್ತ ಮಹಿಳಾ ಪ್ರಾತಿನಿಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಗಾಯತ್ರಿ ಶಾಂತೇಗೌಡ ಅವರು ಮಂತ್ರಿಯಾಗುವುದಕ್ಕೆ ಸ್ವತಃ ಸಿದ್ದರಾಮಯ್ಯ ಅವರೇ ಅಡ್ಡಿಯಾದರು ಎಂದು ದೂರಿದ ಪ್ರತಾಪ್ ಸಿಂಹ, ಮುಜುಫೋಡಿಸಿಕೊಂಡು 14 ಸೈಟ್ ಪಡೆದು ಭ್ರಷ್ಟಾಚಾರ ನಡೆಸಿದವರಿಗೆ ಹಾಗೂ ಕುಟುಂಬ ರಾಜಕಾರಣವನ್ನು ಪ್ರೋತ್ಸಾಹಿಸುವವರಿಗೆ ಬೇರೆಯವರ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ. ರಾಜ್ಯ ರಾಜಕೀಯವನ್ನು ಸಂಪೂರ್ಣವಾಗಿ ಹೊಲಸು ಮಾಡಿದ್ದೇ ಸಿದ್ದರಾಮಯ್ಯ ಎಂದು ಆಕ್ರೋಶ ಹೊರಹಾಕಿದರು.
