ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿಸಿಬಿ ಪೊಲೀಸರು ನಡೆಸಿದ ದಿಢೀರ್ ದಾಳಿಯ ವೇಳೆ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಸೆಲ್ನಲ್ಲಿ ಮೊಬೈಲ್ ಮತ್ತು ಪೆನ್ ಡ್ರೈವ್ ಪತ್ತೆಯಾಗಿರುವುದು ದೊಡ್ಡ ಸಂಚಲನ ಮೂಡಿಸಿದೆ.
ಜೈಲಿನ ವಿಐಪಿ ಸೆಲ್ನಲ್ಲಿ ಸಿಕ್ಕ ಈ ಎಲೆಕ್ಟ್ರಾನಿಕ್ ವಸ್ತುಗಳನ್ನು ಪರಿಶೀಲಿಸಿದಾಗ, ಅವುಗಳಲ್ಲಿ ಯುವತಿಯರ ಅಶ್ಲೀಲ ವಿಡಿಯೋಗಳು ಹಾಗೂ ಫೋಟೋಗಳ ಕಟ್ಟಿಂಗ್ಗಳು ಇರುವುದು ಕಂಡುಬಂದು ಪೊಲೀಸ್ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಪ್ರಜ್ವಲ್ ಬಳಿ ನೀಲಿ ಬಣ್ಣದ ರೆಡ್ಮಿ 5ಜಿ ಮೊಬೈಲ್, ಚಾರ್ಜರ್, ಪಾಕೆಟ್ ನೋಟ್ಬುಕ್ ಮತ್ತು ಕಪ್ಪು ಬಣ್ಣದ ಸ್ಯಾಂಡಿಸ್ಕ್ ಪೆನ್ಡ್ರೈವ್ ದೊರೆತಿದ್ದು, ಇವುಗಳನ್ನು ಒದಗಿಸಿದವರು ಯಾರು ಎಂಬುದು ನಿಗೂಢವಾಗಿದೆ. ಈ ಗಂಭೀರ ಪ್ರಕರಣದ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣನನ್ನು ವಿಐಪಿ ಸೆಲ್ನಿಂದ ಸಾಮಾನ್ಯ ಸಜಾ ಬಂಧಿಗಳ ಸೆಲ್ಗೆ ಶಿಫ್ಟ್ ಮಾಡಲಾಗಿದ್ದು, ಈಗ ಇಪ್ಪತ್ತು ಮಂದಿ ಖೈದಿಗಳ ಜೊತೆ ಒಂದೇ ಶೌಚಾಲಯವಿರುವ ಸಾಮಾನ್ಯ ಕೋಣೆಯಲ್ಲಿ ವಾಸಿಸುವಂತಾಗಿದೆ.
ಅಲ್ಲದೆ, ಜೈಲಿನ ಕಡ್ಡಾಯ ಸಮವಸ್ತ್ರ ಧರಿಸಿ ಲೈಬ್ರರಿಯಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳು ತಾಕೀತು ಮಾಡಿದ್ದಾರೆ. ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಜೈಲಿನ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಈರಣ್ಣ ರಂಗಾಪುರ ಅವರನ್ನು ಅಮಾನತುಗೊಳಿಸಲಾಗಿದ್ದು, ಜೈಲು ಎಸ್ಪಿ ಅನ್ಶುಕುಮಾರ್ಗೂ ಡಿಜಿಪಿ ಅಲೋಕ್ ಕುಮಾರ್ ನೋಟಿಸ್ ಜಾರಿ ಮಾಡಿ ತಕ್ಷಣವೇ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ.
