ವಿಜಯನಗರ ಜಿಲ್ಲೆಯಲ್ಲಿ
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ, ವಿಜಯನಗರ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕಗಳ ಸಂಯುಕ್ತ ಆಶ್ರಯದಲ್ಲಿ 27ನೇ ಕಾರ್ಗಿಲ್ ವಿಜಯೋತ್ಸವ ಹಾಗೂ ಕಾರ್ಗಿಲ್ ಯುದ್ಧದ ಹುತಾತ್ಮರಿಗೆ ಗೌರವ ನಮನ ಸಲ್ಲಿಸುವ ಕಾರ್ಯಕ್ರಮವನ್ನು ಹೊಸಪೇಟೆಯ ಫ್ರೀಡಂ ಪಾರ್ಕ್‌ನಲ್ಲಿ ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಕೆ. ಎಂ. ರಾಜಶೇಖರ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುಬ್ರಹ್ಮಣ್ಯ ಎನ್, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಕವಿತಾ ಎಸ್. ಮುನ್ನಿಕೇರಿ, ಬೆಂಗಳೂರು ಭಯೋತ್ಪಾದನೆ ನಿಗ್ರಹ ಕೇಂದ್ರದ ನಿರ್ದೇಶಕರಾದ ಬ್ರಿಗೇಡಿಯರ್ ದಯಾಳನ್, ವಿಜಯನಗರ ಜಿಲ್ಲಾ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಮಂಜುನಾಥ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎಸ್. ಜಾಹ್ನವಿ, ಹಾಗೂ ಇತರ ಗಣ್ಯರು ಭಾಗವಹಿಸಿದರು. ಫ್ರೀಡಂ ಪಾರ್ಕ್‌ನಲ್ಲಿ ಹುತಾತ್ಮರ ಸ್ಮಾರಕಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಬಳಿಕ ಫ್ರೀಡಂ ಪಾರ್ಕ್‌ನಿಂದ ವಿಜಯನಗರ ಕಾಲೇಜಿನವರೆಗೆ ಭವ್ಯ ಮೆರವಣಿಗೆ ನಡೆಯಿತು. ಮಾಜಿ ಸೈನಿಕರು, ವಿವಿಧ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಎನ್‌ಸಿಸಿ (NCC), ಎನ್‌ಎಸ್‌ಎಸ್ (NSS) ಸ್ವಯಂಸೇವಕರು, ಪೊಲೀಸ್ ಇಲಾಖೆ ಸಿಬ್ಬಂದಿ, ನಿವೃತ್ತ ಸೈನಿಕರು, ವಿಜಯನಗರ ಜಿಲ್ಲೆಯ ಹುತಾತ್ಮರ ಕುಟುಂಬದ ವೀರನಾರಿಯರು ಹಾಗೂ ಹೊಸಪೇಟೆ ಸಹಾಯಕ ಆಯುಕ್ತರಾದ ವಿವೇಕಾನಂದ ಪಿ. ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಅತಿ ದೊಡ್ಡ ರಾಷ್ಟ್ರಧ್ವಜವನ್ನು ಹಿಡಿದು ದೇಶಭಕ್ತಿ ಘೋಷಣೆಗಳನ್ನು ಕೂಗುತ್ತ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ದೃಶ್ಯ ಸಾರ್ವಜನಿಕರ ಗಮನ ಸೆಳೆಯಿತು.
ವಿಜಯನಗರ ಕಾಲೇಜಿನ ಒಳಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭಕ್ಕೆ ಡೋಣೂರು ಚಾನುಕೋಟಿ ಮಠ, ಕೊಟ್ಟೂರಿನ ಪರಮಪೂಜ್ಯ ಡಾ. ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಸಭೆಯಲ್ಲಿ 1962ರ ಚೀನಾ-ಭಾರತ ಯುದ್ಧ, 1965 ಹಾಗೂ 1971ರ ಭಾರತ–ಪಾಕಿಸ್ತಾನ ಯುದ್ಧಗಳು ಮತ್ತು 1999ರ ಕಾರ್ಗಿಲ್ ಯುದ್ಧದ ಮಹತ್ವವನ್ನು ಸ್ಮರಿಸಲಾಯಿತು. ಕಾರ್ಗಿಲ್ ಯುದ್ಧದಲ್ಲಿ ದೇಶ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ 527 ಹುತಾತ್ಮ ಸೈನಿಕರಿಗೆ ಗೌರವಪೂರ್ವಕ ನಮನ ಸಲ್ಲಿಸಿ ಅವರ ಶೌರ್ಯ, ತ್ಯಾಗ ಹಾಗೂ ದೇಶಸೇವೆಯನ್ನು ಕೊಂಡಾಡಲಾಯಿತು.
ಯುವಜನರಲ್ಲಿ ದೇಶಭಕ್ತಿ, ರಾಷ್ಟ್ರೀಯತೆ ಹಾಗೂ ಸೈನಿಕರ ತ್ಯಾಗದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಗಿಲ್ ಯುದ್ಧ ಮತ್ತು ಭಾರತೀಯ ಸೈನಿಕರ ಕುರಿತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಗಣ್ಯರು ಬಹುಮಾನ ವಿತರಿಸಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸೈನಿಕರು, ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಹುತಾತ್ಮರ ಕುಟುಂಬದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರಿಗೆ ಕೃತಜ್ಞತಾಭಾವದಿಂದ ಗೌರವ ನಮನ ಸಲ್ಲಿಸಿದರು.
