Top News

ಶ್ರೀ ಕಲ್ಲೇಶ್ವರ ಕಾಯರ್ ಇಂಡಸ್ಟ್ರೀಸ್ ಅಂಡ್ ಆರ್ಗಾನಿಕ್ಸ್ ಮ್ಯಾನ್ಯೂರ್ಸ್‌ಗೆ ದೇಸಿ ತರಬೇತಿದಾರರ ಕ್ಷೇತ್ರ ಭೇಟಿ

ಅಜ್ಜಂಪುರ:

ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ), ಮೂಡಿಗೆರೆ ವತಿಯಿಂದ ನಡೆಯುತ್ತಿರುವ ಡಿಪ್ಲೊಮಾ ಇನ್ ಅಗ್ರಿಕಲ್ಚರಲ್ ಎಕ್ಸ್‌ಟೆನ್ಷನ್ ಸರ್ವಿಸಸ್ ಫಾರ್ ಇನ್‌ಪುಟ್ ಡೀಲರ್ಸ್ (DAESI) ತರಬೇತಿ ಕಾರ್ಯಕ್ರಮದ ಅಂಗವಾಗಿ ದೇಸಿ ತರಬೇತಿದಾರರು ಅಜ್ಜಂಪುರ ತಾಲೂಕಿನ ಕಾಟಿಗನೆರೆ ಗ್ರಾಮದ ಶ್ರೀ ಕಲ್ಲೇಶ್ವರ ಕಾಯರ್ ಇಂಡಸ್ಟ್ರೀಸ್ ಅಂಡ್ ಆರ್ಗಾನಿಕ್ಸ್ ಮ್ಯಾನ್ಯೂರ್ಸ್ ಸಂಸ್ಥೆಗೆ ಕ್ಷೇತ್ರ ಭೇಟಿ ನೀಡಿ ಉತ್ಪಾದನಾ ಘಟಕಗಳ ಕಾರ್ಯವೈಖರಿಯನ್ನು ವೀಕ್ಷಿಸಿದರು.

ಕ್ಷೇತ್ರ ಭೇಟಿಯ ಸಂದರ್ಭದಲ್ಲಿ ಸಂಸ್ಥೆಯ ಪ್ರೋಪ್ರೈಟರ್ ಶಿವಪ್ರಸಾದ್ ಅವರು ಸಂಸ್ಥೆಯ ಕಾರ್ಯಚಟುವಟಿಕೆಗಳು, ಸಾವಯವ ಗೊಬ್ಬರ ಉತ್ಪಾದನಾ ವಿಧಾನಗಳು, ಕಚ್ಚಾ ವಸ್ತುಗಳ ಆಯ್ಕೆ ಮತ್ತು ಸಂಸ್ಕರಣೆ, ಗುಣಮಟ್ಟ ನಿಯಂತ್ರಣ ಕ್ರಮಗಳು ಹಾಗೂ ರೈತರಿಗೆ ಸಾವಯವ ಗೊಬ್ಬರಗಳ ಉಪಯುಕ್ತತೆ ಕುರಿತು ತರಬೇತಿದಾರರಿಗೆ ಸಮಗ್ರ ಮಾಹಿತಿ ನೀಡಿದರು.

2011ರಲ್ಲಿ ಆರಂಭವಾದ ಈ ಸಂಸ್ಥೆಯಲ್ಲಿ ಪ್ರಸ್ತುತ ಸುಮಾರು 50 ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 400ಕ್ಕೂ ಅಧಿಕ ವಿತರಕರ ಜಾಲದ ಮೂಲಕ ಉತ್ಪನ್ನಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಇದರ ಜೊತೆಗೆ 92 ನೋಂದಾಯಿತ ಡೀಲರ್‌ಗಳು ಸಂಸ್ಥೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಸಣ್ಣ ಪ್ರಮಾಣದ ಕೈಗಾರಿಕೆಯಾಗಿದ್ದರೂ, ಬೇವಿನ ಪುಡಿಯನ್ನು ಕರ್ನಾಟಕ ರಾಜ್ಯದಾದ್ಯಂತ ನೇರವಾಗಿ ಪೂರೈಸುವಲ್ಲಿ ಮುಂಚೂಣಿಯ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದು ಶಿವಪ್ರಸಾದ್ ತಿಳಿಸಿದರು.

ಈ ಸಂಸ್ಥೆಯ ಪ್ರಮುಖ ಉತ್ಪನ್ನವಾದ ಬೇವಿನ ಪುಡಿ (Neem Cake Powder) ಸಾವಯವ ಕೃಷಿಯಲ್ಲಿ ಅತ್ಯಂತ ಮಹತ್ವದ್ದಾಗಿದೆ. ಎಣ್ಣೆ ತೆಗೆದ ನಂತರ ಉಳಿಯುವ ಬೇವಿನ ಕಾಳಿನ ಪಿಂಡವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಉತ್ತಮ ಗುಣಮಟ್ಟದ ಪುಡಿಯಾಗಿ ತಯಾರಿಸಲಾಗುತ್ತದೆ. ಇದು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದರ ಜೊತೆಗೆ ಬೇರುಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಮಣ್ಣಿನಲ್ಲಿ ಇರುವ ಹಾನಿಕಾರಕ ನೆಮಟೋಡ್‌ಗಳು ಹಾಗೂ ಕೆಲವು ಕೀಟಗಳ ನಿಯಂತ್ರಣಕ್ಕೂ ಸಹಕಾರಿ. ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಸ್ನೇಹಿ ಕೃಷಿಗೆ ಉತ್ತೇಜನ ನೀಡುವಲ್ಲಿ ಬೇವಿನ ಪುಡಿ ಪ್ರಮುಖ ಪಾತ್ರ ವಹಿಸುತ್ತದೆ.

ಇದರ ಜೊತೆಗೆ ಕೃಷಿ ತ್ಯಾಜ್ಯಗಳ ಮರುಬಳಕೆ, ಕೊಯರ್ ಪಿಥ್ ಆಧಾರಿತ ಸಾವಯವ ಉತ್ಪನ್ನಗಳ ತಯಾರಿಕೆ, ಮಣ್ಣಿನ ಸಾವಯವ ಇಂಗಾಲದ ಪ್ರಮಾಣ ಹೆಚ್ಚಿಸುವ ತಂತ್ರಜ್ಞಾನ, ಸೂಕ್ಷ್ಮಜೀವಿಗಳ ಚಟುವಟಿಕೆಯನ್ನು ಉತ್ತೇಜಿಸುವ ವಿಧಾನಗಳು ಹಾಗೂ ಸುಸ್ಥಿರ ಕೃಷಿ ಪದ್ಧತಿಗಳ ಕುರಿತು ತರಬೇತಿದಾರರಿಗೆ ಪ್ರಾಯೋಗಿಕ ಮಾಹಿತಿ ನೀಡಲಾಯಿತು.

ತರಬೇತಿದಾರರು ವಿವಿಧ ಉತ್ಪಾದನಾ ಘಟಕಗಳು, ಕಚ್ಚಾ ವಸ್ತು ಸಂಗ್ರಹಣೆ, ಯಂತ್ರೋಪಕರಣಗಳ ಕಾರ್ಯವೈಖರಿ, ಪ್ಯಾಕಿಂಗ್ ವಿಭಾಗ ಹಾಗೂ ಗುಣಮಟ್ಟ ಪರೀಕ್ಷಾ ವಿಧಾನಗಳನ್ನು ವೀಕ್ಷಿಸಿ, ಸಾವಯವ ಗೊಬ್ಬರ ತಯಾರಿಕೆಯ ಪ್ರಾಯೋಗಿಕ ಅನುಭವವನ್ನು ಪಡೆದುಕೊಂಡರು.

ಇಂತಹ ಕ್ಷೇತ್ರ ಭೇಟಿಗಳು ದೇಸಿ ತರಬೇತಿದಾರರ ಜ್ಞಾನವನ್ನು ವೃದ್ಧಿಸುವುದರೊಂದಿಗೆ, ರೈತರಿಗೆ ವೈಜ್ಞಾನಿಕ ಹಾಗೂ ಗುಣಮಟ್ಟದ ಕೃಷಿ ಸಲಹೆಗಳನ್ನು ನೀಡಲು ಸಹಕಾರಿಯಾಗಲಿವೆ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ಕೆವಿಕೆ ಅನುವುಗಾರರಾದ ರಾಮಚಂದ್ರಪ್ಪ, ಪೂರ್ಣಪ್ರಜ್ಞ ಹಾಗೂ ದೇಸಿ ತರಬೇತಿದಾರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!