ಬೆಂಗಳೂರು: ಬೆಂಗಳೂರಿನಲ್ಲಿ ಬಿಹಾರ ಮೂಲದ ರೀಮಾಕುಮಾರಿ ಎಂಬ ಮಹಿಳೆಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತಿಯನ್ನು ಬಿಹಾರದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಕುಂಬಳಗೋಡು ಬಳಿಯ ಗೇರುಪಾಳ್ಯದಲ್ಲಿ ಕಳೆದ ತಿಂಗಳು ಜುಲೈ 25ರಂದು ರೀಮಾಕುಮಾರಿ ಎಂಬ ಮಹಿಳೆಯ ಕೊಲೆಯಾಗಿತ್ತು.
ಇದೀಗ ಭೀಕರ ಕೊಲೆ ಪ್ರಕರಣದ ಅಸಲಿ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣದ ಆರೋಪಿ, ಆಕೆಯ ಪತಿ ಧೀರಜ್ ಕುಮಾರ್ (24) ಎಂಬಾತನನ್ನು ಬಿಹಾರದಲ್ಲಿ ಬಂಧಿಸಿ ಕರೆತಂದ ಕುಂಬಳಗೋಡು ಠಾಣೆ ಪೊಲೀಸರು ಕೊಲೆಗೆ ಕಾರಣ ಬಹಿರಂಗಪಡಿಸಿದ್ದಾರೆ.
ಬಿಹಾರ ಮೂಲದ ಧೀರಜ್ ಮತ್ತು ರೀಮಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಜೀವನೋಪಾಯಕ್ಕಾಗಿ ಸುಮಾರು 10 ತಿಂಗಳ ಹಿಂದೆ ಬೆಂಗಳೂರಿಗೆ ಬಂದು ಕುಂಬಳಗೋಡಿನ ಗೇರುಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಬೆಂಗಳೂರಿಗೆ ಬಂದ ಕೆಲವೇ ತಿಂಗಳುಗಳಲ್ಲಿ ರೀಮಾ ಪತಿ ಧೀರಜ್ ಮೇಲೆ ಆಸಕ್ತಿ ಕಳೆದುಕೊಂಡಿದ್ದಳು. ಮನೆಯಲ್ಲಿದ್ದಾಗ ಸದಾ ಮೊಬೈಲ್ನಲ್ಲಿ ‘ರೀಲ್ಸ್’ ಮಾಡುತ್ತಾ ಕಾಲ ಕಳೆಯುತ್ತಿದ್ದಳು.
ದಾಂಪತ್ಯ ಜೀವನದಲ್ಲೂ ಪತಿಯೊಂದಿಗೆ ಸಹಕರಿಸದೆ ಲೈಂಗಿಕ ಕ್ರಿಯೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಳು. ರೀಮಾ ದಿನನಿತ್ಯ ತನಗೆ ಬೇಕಾಗುವಷ್ಟು ಮಾತ್ರ ಅಡುಗೆ ಮಾಡಿ ತಿಂದು ಮಲಗುತ್ತಿದ್ದಳು. ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಪತಿ ಧೀರಜ್ಗೆ ಊಟ ನೀಡುತ್ತಿರಲಿಲ್ಲ. ಅಲ್ಲದೆ, ತನಗೆ ಬೆಂಗಳೂರು ಬೇಡ, ವಾಪಸ್ ಬಿಹಾರಕ್ಕೆ ಹೋಗಬೇಕೆಂದು ಪಟ್ಟು ಹಿಡಿದಿದ್ದಳು. ಇದರಿಂದ ದಂಪತಿ ನಡುವೆ ನಿತ್ಯ ಗಲಾಟೆ ನಡೆಯುತ್ತಿತ್ತು.
ಕೊಲೆಯಾದ ದಿನ ಧೀರಜ್ ಕೆಲಸ ಮುಗಿಸಿ ಮನೆಗೆ ಬಂದಾಗ ಮನೆಯಲ್ಲಿ ಊಟ ಇರಲಿಲ್ಲ. ಈ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಆರಂಭವಾಗಿದೆ. ಜಗಳದ ವೇಳೆ ರೀಮಾ ಮೊದಲು ದೊಣ್ಣೆಯಿಂದ ಪತಿ ಧೀರಜ್ಗೆ ಹೊಡೆದಿದ್ದಾಳೆ. ಇದರಿಂದ ಕೋಪಗೊಂಡ ಧೀರಜ್, ಪತ್ನಿಯ ದುಪ್ಪಟ್ಟಾದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಮುಖಕ್ಕೆ ಪ್ಲಾಸ್ಟಿಕ್ ಪೇಪರ್ ಸುತ್ತಿ, ಶವವನ್ನು ಮನೆಯಲ್ಲೇ ಬಿಟ್ಟು ಬಿಹಾರಕ್ಕೆ ಪರಾರಿಯಾಗಿದ್ದ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕುಂಬಳಗೋಡು ಪೊಲೀಸರು, ತಾಂತ್ರಿಕ ಕಾರ್ಯಾಚರಣೆ ನಡೆಸಿ ಬಿಹಾರದಲ್ಲಿದ್ದ ಆರೋಪಿ ಧೀರಜ್ನನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ. ವಿಚಾರಣೆ ವೇಳೆ ಆರೋಪಿ ಧೀರಜ್ ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.
